Mulayam Singh Yadav: ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ನಿಧನ

Mulayam Singh Yadav Passed Away: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ (82) ವಿಧಿವಶರಾಗಿದ್ದಾರೆ.

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ (82) ವಿಧಿವಶರಾಗಿದ್ದಾರೆ (Mulayam Singh Yadav Passed Away). ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸೋಮವಾರ ಕೊನೆಯುಸಿರೆಳೆದಿದ್ದಾರೆ. 

ಒಂದು ವಾರದಿಂದ ಐಸಿಯುನಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಮುಲಾಯಂ ನಿಧನದ ಸುದ್ದಿಯನ್ನು ಅವರ ಪುತ್ರ ಅಖಿಲೇಶ್ ಯಾದವ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಮುಲಾಯಂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ್ದರು. ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1967 ರಲ್ಲಿ, ಅವರು ಮೊದಲ ಬಾರಿಗೆ ಯುಪಿ ವಿಧಾನಸಭೆಗೆ ಆಯ್ಕೆಯಾದರು. ಅವರು ನವೆಂಬರ್ 22, 1939 ರಂದು ಜನಿಸಿದರು.

ಸಮಾಜವಾದಿ ಪಕ್ಷದ ನಾಯಕರಾಗಿ ದೇಶದ ರಾಜಕೀಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು. ರಾಮ್ ಮನೋಹರ ಲೋಹಿಯಾ ಅವರಂತಹ ಮಹಾನ್ ನಾಯಕರ ಮಾರ್ಗದರ್ಶನದಲ್ಲಿ ರಾಜಕೀಯ ಕೌಶಲ್ಯಗಳನ್ನು ಕಲಿತ ಅವರು ಉತ್ತರ ಪ್ರದೇಶದ ಜನರು ಅವರನ್ನು ‘ನೇತಾಜಿ’ ಎಂದು ಕರೆಯುವಷ್ಟು ಖ್ಯಾತಿಯನ್ನು ಗಳಿಸಿದರು. 

ಸಾಮಾನ್ಯ ಕಾರ್ಯಕರ್ತನ ಮಟ್ಟದಿಂದ ಹಂತ ಹಂತವಾಗಿ ಏರಿದರು. ಯುಪಿ ಸಿಎಂ ಆಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ತುರ್ತುಪರಿಸ್ಥಿತಿ ಹೇರಿಕೆಯ ಸಂದರ್ಭದಲ್ಲಿ 19 ತಿಂಗಳು ಜೈಲು ವಾಸ ಅನುಭವಿಸಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಹತ್ತು ಬಾರಿ ಶಾಸಕರಾಗಿ ಏಳು ಬಾರಿ ಸಂಸದರಾಗಿ ಗೆದ್ದಿದ್ದಾರೆ. 

1977 ರಲ್ಲಿ ಅವರು ಮೊದಲ ಬಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದರು. 1980 ರಲ್ಲಿ ಅವರು ಯುಪಿಯಲ್ಲಿ ಲೋಕದಳ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ಸಮಾಜವಾದಿ ಪಕ್ಷವನ್ನು 1992 ರಲ್ಲಿ ಸ್ಥಾಪಿಸಲಾಯಿತು. 1989 ರಲ್ಲಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರು. 

1993ರಲ್ಲಿ ಎರಡನೇ ಬಾರಿಗೆ, 2003ರಲ್ಲಿ ಮತ್ತೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. 1996 ರಲ್ಲಿ ಮೊಯಿನ್‌ಪುರಿಯಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದ ಅವರು ಯುನೈಟೆಡ್ ಫ್ರಂಟ್ ಸಮ್ಮಿಶ್ರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದರು.

Mulayam Singh Yadav Passed Away